ಬಾರಮ್ಮ ಇಂದಿರಮ್ಮ ಪ
ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ
ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ
ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ
ಭಾವಶುದ್ಧಿಯಲಿ ಪೂಜೆಗೈವೆನಮ್ಮ
ಓವರಿಗೆ ದಯಮಾಡು ದೇವಗಂಗಾ ಜಲದಿ
ಪಾವನ ಪಾದಾಂಬುಜವ ತೊಳೆವೆನಮ್ಮಾ 1
ತವದಿವ್ಯ ಭೂಷಣವ ನವರತ್ನ ಹಾರಗಳ
ಸುವಿಲಾಸದಿಂದಿತ್ತು ಮಣಿವೆನಮ್ಮ
ಪವಳಪದುಮಾಸನ ವಿಶ್ರಾಂತಳಾಗಮ್ಮ
ನವಪುಷ್ಪ ಕುಂಜಗಳ ಧರಿಪೆನಮ್ಮ 2
ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ
ಬಗೆಬಗೆಯ ದೀಪಗಳ ನೀಡುವೆನಮ್ಮಾ
ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ
ನಗುನಗುತ ಸ್ವೀಕರಿಸಿ ಪಾಲಿಸಮ್ಮ3
ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ
ದೇವಿ ತವಕರುಣೆಯನು ಬೇಡುತಿಹರು
ಶ್ರೀವನಿತೆ ನಾನೀವ ತಾಂಬೂಲವನು ಸವಿದು
ಜೀವಕೋಟಿಗೆ ಸುಖವನೀವುದಮ್ಮಾ 4
ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು
ಎಡೆಬಿಡದೆ ಹರಿಪಾದ ಸೇವೆಗೈದು
ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು
ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5