ವಂದಿಪೆ ಶ್ರೀಮನ್ನಾರಾಯಣಗೆ
ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ
ವಂದಿಪೆ ವಿಶ್ವಕ್ಸೇನರಿಗೆ
ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ
ವಂದಿಪೆ ನಾ ಮೊದಲಾಳ್ವಾರರಿಗೆ
ಅಂದದಿ ಹರಿಯ ತೋರಿಕೊಟ್ಟರಿಗೆ
ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ-
ಬಂಧದಿವ್ಯಗಳ ಬೆಳಗಿಸಿದವರಿಗೆ 1
ವಂದಿಪೆ ವಂದಿಪೆ ಆಚಾರ್ಯರಿಗೆ
ಚಂದದಾ ಯತಿತ್ರಯರುಗಳಿಗೆ
ಸುಂದರ ಶ್ರೀವೈಷ್ಣವ ತತ್ವಗಳನು
ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2
ಇನ್ನು ವಂದಿಪೆ ಗುರುಪೀಠಕ್ಕೆ
ಚೆನ್ನ ತಿರುನಾರಾಯಣಪುರಕೆ
ಉನ್ನತ ರಂಗದಾಸಯತಿವರ್ಯಗೆ
ಸನ್ನುತ ಪಿತಾನುಜ ಶಾಮದಾಸರಿಗೆ 3
ಸಾಜದಲೆನ್ನಲಿ ಅರಿವನು ಮೂಡಿಸಿ
ಓಜನನಾಗಿಸೆ ಕೇಶವ ನಾಮದಿ
ಆರ್ಜಿಸಿ ಉಪಾದಾನದಿ ಬಳಲಿದ
ಪೂಜ್ಯಪಿತ ವೆಂಕಟರಂಗಾರ್ಯರಿಗೆ 4
ವಂದಿಪೆ ಕೊನೆ ಮೊದಲಿಲ್ಲದೆ ವಂದಿ-
ಪೆಂ ದಾಸನ ಮಾಡಿದ ದೇವನಿಗೆ
ತಂದೆ ಜಾಜಿಪುರಾಧೀಶನಿಗೆ ಮುದ-
ದಿಂದ ಶ್ರೀ ಚೆನ್ನಕೇಶವಗೆ 5