ಮುಕುತಿ ತಮಸು ಎರಡಿಲ್ಲೆ ಕಂಡ್ಯಾ
ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ
ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ
ಹರಿಯ ಗುಣಂಗಳ ಕೊಂಡಾಡುತ
ಪರಮ ಉತ್ತಮರು ಬರಲು ಬನ್ನಿ ಬನ್ನೆಂದು
ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1
ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು
ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ
ಈ ನಾಡಿನೊಳಗಿವ ಹೀನವನು ಎಂಬರ್ಥ
ಈ ನುಡಿ ಎನಿಸಿಕೊಂಬುದೆ ತಮಸು 2
ಒಂದರೊಳಾನಂತ ಅನಂತದಲಿ ಒಂದು
ಒಂದೊಂದು ಅನಂತ ಹರಿಪ್ರೇರಕ
ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ
ನಿಂದಕವಾಗಿ ಬಾಳುವದೆ ಮುಕ್ತಿ 3
ಅನ್ನದಾ ಸಮಯ ಇಲ್ಲದೆ ಕಂಡಲ್ಲಿ
ತಿನ್ನಲೋಡಿ ಸಮಯವೆನ್ನದೆ
ಅನ್ಯರ ಬದುಕ ಪಹರಿಸುವ ಖಲು
ಗನ್ನ ಫಾತಕನೆನಿಸಿಕೊಂಬುವದೆ ತಮಸು 4
ಮೀಸಲಾ ಮನದಲ್ಲಿ ವಾಸುದೇವನ ನಿಜ
ವಾಸರದಲ್ಲಿ ಜಾಗರಾ ಮಾಡುವಾ
ಆಶೆಬಡಕನಲ್ಲ ದೇಶದೊಳಗೆ ಹರಿ
ದಾಸನೆಂದು ಪೇಳುವುದೆ ಮುಕ್ತಿ 5
ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ
ಕಥಾಶ್ರವಣ ಒಂದು ಕೇಳಲಿಲ್ಲ
ಪಿತ ಮಾತರನ್ನ ಬೊಗಳುವ ನಾಯಿ ಕು
ತ್ಸಿತನು ಎಂದೆನಿಸುವದೆ ತಮಸು 6
ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ
ತೃಣ ಜೀವಾದಿಯ ಭೇದಬಲ್ಲನಿವ
ಗಣನೆಮಾಡ ವಿಜಯವಿಠ್ಠಲನಲ್ಲದೆ
ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7