ನರಹರಿಯ ಗುಣ ಕೊಂಡಾಡುವುದೇ ಲೇಸು
ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ
ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ
ಒಳ್ಳೆಯವನೆನಿಸುವ ಬಡತನವೇ ಲೇಸು
ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ
ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1
ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ
ಸಾಲಿಲ್ಲದ ಮನೆಯಲ್ಲಿಹುದೇ ಲೇಸು
ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ
ಲೋಲನಾ ಪಾದದಲ್ಲಿರುವುದೇ ಲೇಸು 2
ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ
ತನ್ನವಳ ಕೂಡ ಬಡಿದಾಡುವುದೇ ಲೇಸು
ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ
ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3
ತಾನು ಮಾಡಿದೆನೆಂಬುದಕಿಂತ ಹರಿಯ
ಆಧೀನವೆಂದರಿಯುವುದು ಪರಮ ಲೇಸು
ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ
ಜ್ಞಾನಿಯಾದವನ ಸಲಹುವುದೇ ಲೇಸು 4
ದುಷ್ಟ ಮನುಜನು ಮಾಡುವ ಕೃಪೆಗಿಂತಲೂ
ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು
ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ
ವಿಠಲನ ಧ್ಯಾನದ ಸುಖವೇ ಲೇಸು 5