ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು
ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ.
ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ
ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ
ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ
ಭಂಗಪಡಿಸುತ ಬಾಯ ತೆರೆದನಮ್ಮ 1
ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ
ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ
ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ
ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2
ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ
ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ
ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ
ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3