ಉದಯವಾಯಿತು ಹೃದಯ ಕಮಲದೊಳಗೆ ಧ್ರುವ
ಗುರುಕರುಣಾನಂದಬೋಧ ಅರುಣೋದಯವಾಯಿತು
ಸ್ಮರಣಿಗರವು ದೊರೆಯಿತು ಹರಿಯ ಚರಣದ 1
ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು
ತಾಮಸನಿದ್ರೆ ಹರಿಯಿತು ತಿಮಿರಾಂಧದ 2
ಥಳಥಳಿಸುವ ರವಿಕೋಟಿ ಬೆಳಗಾಯಿತು
ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ 3
ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ
ಉದಯವಾಯಿತದೃಷ್ಟವು ಸದೃಷ್ಟವಾಗಿ 4
ಸದ್ಗತಿ ಸುಖವಿದು ಸದೋದಿತವಾಯಿತು
ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು 5