*
ಹರಿಗುರು ಕರುಣದಿ ದೊರಕಿದುದೆನಗೀ
ಪರಮ ಪಾವನ ತಂಬೂರಿ ಪ.
ನರÀಹರಿ ಭಕ್ತರು ಒಲಿದೆನಗಿತ್ತರು
ಸುಲಲಿತ ನಾದದ ತಂಬೂರಿ ಅ.ಪ.
ತಂದೆ ಮುದ್ದುಮೋಹನರು ಸ್ವಪ್ನದಿ
ತಂದು ತೋರಿದಂಥ ತಂಬೂರಿ
ನಂದ ಕಂದನ ಗುಣ ಅಂದದಿ ಸ್ತುತಿಸೆ ಆ-
ನಂದವ ತೋರುವ ತಂಬೂರಿ
ಇಂದಿರೇಶನ ಭಕ್ತರಂದದಿ ಧರಿಸುವ
ರೆಂದೆಂದಿಗು ಈ ತಂಬೂರಿ
ನೊಂದು ಭವದೊಳು ತಪ್ತರಾದವರಿಗೆ
ಬಂಧನ ಬಿಡಿಸುವ ತಂಬೂರಿ 1
ಅಂತರಭಕ್ತರು ಹರುಷದಿ ನುಡಿಸುವ
ಕಂತುಪಿತಗೆ ಪ್ರೀತಿ ತಂಬೂರಿ
ಸಂತತ ಮಾನಾಭಿಮಾನವ ತೊರೆದು ಏ-
ಕಾಂತದಿ ಸುಖಿಸುವ ತಂಬೂರಿ
ಶಾಂತದಿ ನಾರದಾದಿಗಳು ವೈಕುಂಠದಿ
ನಿಂತು ನುಡಿಸುವಂಥ ತಂಬೂರಿ
ಪಂಥದಿ ಹರಿಪಾದಂಗಳ ಭಜಿಸೆ ನಿ-
ಶ್ಚಿಂತೆಯ ಮಾಳ್ಪಂಥ ತಂಬೂರಿ2
ಬಲು ಬಲು ಪರಿಯಲಿ ಹರಿದಾಸತ್ವಕೆ
ಬರುವಂತೆ ಮಾಡಿದ ತಂಬೂರಿ
ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ
ಒಲುಮೆಯಿಂದಲಿ ಈ ತಂಬೂರಿ
ನೆಲೆಯಾದೆನು ಹರಿದಾಸರ ಮಾರ್ಗದಿ
ಕಲುಷವ ಕಳೆದಿತು ತಂಬೂರಿ
ಸುಲಭದಿಂದ ಶ್ರೀ ಗುರುಗಳು ಕರುಣಿಸಿ
ನೆಲೆಗೆ ನಿಲಿಸಿದಂಥ ತಂಬೂರಿ 3
ಶ್ರೀನಿವಾಸನು ತಾ ಕೊಡಿಸಿದನು
ಏನೆಂಬೆನು ಈ ತಂಬೂರಿ
ಮಾನಾಭಿಮಾನವ ತೊಲಗಿಸುವುದಕೆ
ಕಾರಣವಾಗಿಹ ತಂಬೂರಿ
ಶ್ರೀನಿಧಿ ಸೊಸೆ ಬಹು ಆನಂದದಲಿ
ತಾ ನುಡಿಸುವಳೀ ತಂಬೂರಿ
ಗಾನಲೋಲ ಕೃಷ್ಣ ತಾನೊಲಿವುದಕೆ
ಕಾರಣ ಮಾಡಿಹ ತಂಬೂರಿ 4
ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ
ಕೊಟ್ಟೀ ಕೊಟ್ಟನು ತಂಬೂರಿ
ಎಷ್ಟು ನಾಚಿಕೆಪಟ್ಟರು ಬಿಡದಲೆ
ಕಷ್ಟ ಕಳೆಯಲಿತ್ತ ತಂಬೂರಿ
ಭವ ಕಟ್ಟು ಇಂದೆನ್ನನು
ಮುಟ್ಟಿಸಿತ್ಹರಿಪುರ ತಂಬೂರಿ
ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ
ಕೃಷ್ಣವಿಠ್ಠಲನಿತ್ತ ತಂಬೂರಿ 5