ಮುರಳಿ ಧ್ವನಿಯ ಮಾಡೋ ಮುರಾರೇ ಪ
ಮುರುಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ
ಭವ ಶರಧಿ ದಾಟುವರೈ ಅ.ಪ
ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು
ಕಾಮಜನಕ ಗುಣಧಾಮ ಶ್ರೀ ಕೃಷ್ಣಾ 1
ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ
ಆವು ಮೆಚ್ಚುವಂತೆ ಸಾವಧಾನದಿಂದ 2
ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ
ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ 3
ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ
ನಳಿನಮುಖಿಯರನ್ನು ಒಲಿಸುತಲೊಮ್ಮೆ 4
ವನಜಸಂಭವಪಿತ ಶೀ ನರಹರಿಯೆ
ಕನಸಿನಂದದಿ ಜಗವರಿತು ನೆನೆಯುವಂತೆ 5