ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ
ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ
ಕ್ಲೇಶ ಯಾತಕೇ
ಕಾಸು ಕಳಕೊಂಡು _ ಅತಿಘಾಸಿ ಯಾತಕೇ
ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ
ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1
ನೇಮ ಯಾತಕೇ _ ನಿಷ್ಠೆ ಯಾತಕೇ
ಹೋಮ ಯಾತಕೇ _ ಕಷ್ಟಯಾತಕೇ
ಪ್ರೇಮದಿಂದಲೀ _ ಇವರ ಭಜಿಸಲೂ
ತಾಮಸಗುಣ _ ತಾನೇ ಓಡೋದು 2
ಮಧ್ವಶಾಸ್ತ್ರದ _ ಚಂದ್ರರಿವರು
ಅದ್ವೈತವಾದವ _ ಗೆದ್ದಸಿಂಹರು
ಮಧ್ವರಾಯರಾ _ ಮುದ್ದುಮೊಮ್ಮಗ
ಸಿದ್ಧಸೇವ್ಯರು _ ಸುಧೆಯ ಕರ್ತರು 3
ಇವರ ಧ್ಯಾನವೂ _ ಜ್ಞಾನದಾಯಕಾ
ಇವರ ಪೂಜೆಯೂ _ ಪಾಪನಾಶನ
ಇವರ ಸ್ಮರಣೆ _ ಕಲಿವಿ ಭಂಜನೆ
ಇವರ ಸೇವೆಯು _ ಮುಕ್ತಿಸೋಪಾನ 4
ಶ್ರೀಕಳತ್ರನಾ _ ಆಜ್ಞೆಯಿಂದಲಿ
ನಾಕದಿಂದಲೀ _ ಇಲ್ಲಿ ಬಂದರು
ಏಕಮನದಿ _ ಶರಣು ಹೋಗಲು
ಪಾಪನಾಶನ _ ಪುಣ್ಯವೆಗ್ಗಳಾ 5
ಮಳಖೇಡದೀ _ ನೆಲಸಿ ಇಪ್ಪರೂ
ನಳಿನನಾಭನ _ ಒಲಿಸುತನುದಿನಾ
ನಲಿಸಿ ಮನದೊಳು _ ಒಲಿಸುವಾತನೆ
ಶೀಲವಂತನು _ ಧನ್ಯ ಮಾನ್ಯನು6
ನರನ ವೇಷದಿ _ ಸುರರ ಒಡೆಯನೊ
ಹರಿಯ ಕರುಣದಿ _ ಮೆರೆಯುತಿರ್ಪರು
ಶರಣಜನರ _ ದುರಿತರಾಶಿಯ
ತರಿದು ಶೀಘ್ರದಿ _ ಪೊರೆಯುತಿಪ್ಪರು7
ಎತ್ತಿನ್ವೇಷದಿ _ ವಾತದೇವನ
ಪ್ರೀತಿ ಪಡೆದು _ ಖ್ಯಾತಿಆದರು
ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ
ಬಿತ್ತರಿಸಿದರು, ತತ್ತ್ವಶಾಸ್ತ್ರವ 8
ಕಾಗಿನೀನದೀ _ ತೀರವಾಸರು
ವಿಗತರಾಗರು _ ನಿತ್ಯತೃಪ್ತರು
ಜಾಗರೂಕದಿ _ ಪೊಗಳಿ ಪಾಡಲು
ನಿಗಮವೇದ್ಯನು _ ಬೇಗ ಪೊರೆಯುವ 9
ಶೇಷಾವೇಷದಿ _ ವಾಸಿಸುವರು
ಶೇಷಶಯನನ _ ದಾಸರೀವರು
ಬೆಸರಿಲ್ಲದೆ _ ಆಸೆ ತೊರೆದು
ದಾಸನೆನ್ನಲು _ ಪೋಷಿಸೂವರು 10
ಕೆರೆಯ ಏರಿಯು _ ಬಿರಿದು ಪೋಗಲು
ಮೊರೆಯ ಇಟ್ಟರು _ ಇವರ ಅಡಿಗೆ
ಭರದಿ ಕರುಣದಿ ಹರಿಯ ಸ್ತುತಿಸಿ
ಕರದಿ ಮುಟ್ಟಲು _ ಏರಿ ನಿಂತಿತು 11
ಯರಗೋಳದ _ ಗುಹೆಯ ಒಳಗೆ
ಮರುತದೇವನ _ ಕರುಣದಿಂದಲಿ
ಪರಿಪರಿಯಲಿ _ ಬರೆದು ಟೀಕೆಯ
ಕರೆದು ಸುರಿದರು _ ತತ್ತ್ವಕ್ಷೀರವ 12
ಇವರ ನಾಮವು _ ವಿಜಯ ಸೂಚಕ
ಇವರ ಕೀರ್ತನೆ _ ಭವಕೆ ಔಷಧ
ಇವರ ಕರುಣದಿ _ ಅನಿಲನೊಲಿವನು
ಇವರ ಶಿಷ್ಯರೇ _ ಅವನಿಶ್ರೇಷ್ಠರು 13
ಸರ್ವಕ್ಷೇತ್ರದ _ ಯಾತ್ರೆಯಾ ಫಲ
ಸರ್ವದಾನವ _ ಮಾಡಿದ ಫಲ
ಇವರ ಪಾದವ _ ನಂಬಿ ಭಜಿಸಲು
ತವಕದಿಂದಲಿ _ ತಾನೇ ಬರುವುದು 14
ಜಯತೀರ್ಥರ _ ಹೃದಯವಾಸಿಯು
ವಾಯುಹೃದಯಗ _ ಕೃಷ್ಣವಿಠ್ಠಲನು
ದಯದಿ ನುಡಿಸಿದಾ _ ಪರಿಯು ಪೇಳಿದೆ
ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15