ಬಣ್ಣಿಪ ಪ್ರಾಣವಾರಿಗೆ ನಿಮ್ಮ
ಉನ್ನತೋನ್ನತ ಜಾಣ ಮಹಿಮ ಪ
ಸಾಧಿಸಿ ವೇದನಾದ ಬಿಡದೆ
ಓದಿ ಓದಿ ದಣಿದು ತವ
ಪಾದಕಾಣದೆ ಒರಲುತಿಹ್ಯವು
ಭೇದರಹಿತಾಗಾಧ ಮಹಾತ್ಮ 1
ಶೇಷರಾಜ ದೃಢದಿ ತನ್ನ
ಸಾಸಿರ ಜಿಹ್ವೆಗಳಿಂದ ಅನು
ಮೇಷ ಪೊಗಳಿ ನಿನ್ನ ಕಾಣದೆ
ಬೇಸತ್ತು ಬಾಯಬಿಡುವನಭವ 2
ಸುರಜೇಷ್ಠಸುರಾದಿಗಳು
ಅರಿಯರು ನಿನ್ನ ಪುಣ್ಯಚರಣ
ಅರಿವೆನೆಂತು ಮೂಢನು ನಾನು
ಪೊರೆ ನೀನೆ ದಯದಿ ಶ್ರೀರಾಮ 3