ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು