ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಮನದ ಚಿಂತಿತಾರ್ಥವನೀಯೊ ಸಂತತಂ ಕಾಯೊ ಪ ಚರಣ ಕಮಲವ ಕಂಡು ಶರಣು ಹೊಕ್ಕೆನು ನಾನು ಕರುಣದಿಂದನುದಿನವು ಕಾಯಬೇಕೆನುತ ಸ್ಮರಣೆಪೂರ್ವಕವಾಗಿ ಹರಣವನೆ ಹರಸಿಹೆನು ಹರಿಣನೊಳು ಬಿಲುಗಾರ ಕರುಣ ಬಿಟ್ಟಂತೆ 1 ನರಜನ್ಮವೆಂಬುದಿದು ಕರಕಷ್ಟವಾಗಿರುವ ಉರಿಯ ಮನೆಯನು ಹೊಗುವ ತೆರನಲ್ಲವೆ ಪರಿಪರಿಯ ದುಃಖಗಳು ಬರುವ ಸಮಯಾಂತರದಿ ಮರೆಯಾಗದಿರು ಎನ್ನಸ್ಥಿರದಿ ಮೈದೋರು 2 ತಪ್ಪುಗಳು ಹೊರತಾಗಿ ಅಪ್ಪ ಸೇರುವುದುಂಟೆ ಒಪ್ಪುಗೊಂಬವರಾರು ಸರ್ಪಶಯನ ಬೊಪ್ಪ ಬಹ ದುರಿತಗಳ ತಪ್ಪಿಸಿಯೆ ಕಳೆದೆನ್ನ ಮುಪ್ಪುಗಳ ಪರಿಹರಿಸೊ ಅಪ್ಪಗಿರಿವಾಸ 3 ಉರಗ ಗಿರಿವಾಸ ನಿನ್ಸೆರಗವಿಡಿವೆನು ನಾನು ಕರಗಿ ಹೋಯಿತು ಇರವು ಕಾವರಿಲ್ಲ ಮರುಗಿದರೆ ಧೈರ್ಯವನು ತಿರುಗಿ ಹೇಳುವರಿಲ್ಲ ಕುರಿ(ಗಾ)ಯ್ವ ತೆರನಂತೆ ಕೈಗೆ ಸಿಲುಕಿದೆನು 4 ಇಹಪರದ ಸೌಖ್ಯಗಳ ಕರೆದಿತ್ತು ಕರವಿಡಿದು ಸಹವಾಸವಾಗಿರ್ದು ಸಲಹಿಕೊಂಡು ವಹಿಲದಲಿ ವರವೀವ ವರಾಹತಿಮ್ಮಪ್ಪ ಬಹುಭಾರವನು ತಾಳ್ದು ಸಲಹೆನಿಸೊ ನೀನು 5
--------------
ವರಹತಿಮ್ಮಪ್ಪ