ಶ್ರೀಹರಿ ಸಂಕೀರ್ತನೆಗಳು
ಅಪ್ರಮೇಯ ಎನ್ನ ಪಾಲಿಸೈ
ಅಪ್ಪ ನಿನ್ನ ಪದವ ನಂಬಿರ್ಪೆ ಪಾಲಿಸೈ ಪ
ಸರ್ಪಶಯನ ಕಂದರ್ಪಜನಕ ಕೃಪೆಯ ತೋರಿಸೀಗ ಎನ್ನ
ತಪ್ಪುಗಳನು ಒಪ್ಪಿಸಿರುವೆ ಒಪ್ಪಿಕೊಂಡು ಮನ್ನಿಸೆನ್ನ ಅ.ಪ
ಕರಿಯ ಬಾಧೆಯನ್ನು ಹರಿಸಿದೆ
ತರುಣಿಗಂದು ಕರುಣದಿಂದ ವರವ ನೀಡಿದೆ
ಕರೆಯೆ ಕಂಬದಿಂದ ಬಂದು
ದುರುಳ ದೈತ್ಯನನ್ನು ಕೊಂದು
ತರಳನನ್ನು ಪೊರೆದೆಯೆಂದು
ಶರಣು ಹೊಕ್ಕೆ ದೀನಬಂಧು 1
ರಾಜೇಂದ್ರ ಪುರವರಾಧಿಪ
ರಾಜ ರಾಜ ಮಾಜದೆನ್ನ ಮೊರೆಯ ಕೇಳುತ
ಸುಜನಪಾಲ ನಿನ್ನ ಪದವ
ಭಜನೆಗೈವೆ ವಿಮಲಮತಿಯ
ಭುಜಗಶಯನ ಕರುಣಿಸೆಂದೆ
ಭಜಕ ರಕ್ಷಕ ರಾಘವೇಂದ್ರ 2