ಮಾಧವ ಮುಕುಂದ ಹರಿ
ದನುಜಾರಿದಯಾವಾರಿಧಿ
ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ
ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ.
ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ)
ಹರಿಗೆ ಒಪ್ಪಿಸು ಎನಲು
ಊರ ಹೊರಗೋಡಿಸಿರಲು
ಭರದಿಂದ ಬಂದು ಮರೆಹೊಗಲು ವಿಭೀಷಣನು
ಚರಣಕಮಲಕೆ ಎರಗಲು
ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ
ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ 1
ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ
ನಡುಸಭೆಯೊಳು ನಿಲ್ಲಿಸಲು
ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ
ದುಡುಕುತಿರಲಾಕ್ಷಣದಲಿ
ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ-
ದೊದರುತಿರಲು
ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು
ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ 2
ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ
ಮತ್ತ ತೊಡೆಯೇರಿಇರಲು
ನಿತ್ಯದಲಿ ಸುರುಚಿ ಸುನೀತಿ ಕುಮಾರಕನ
ಎತ್ತಿ ಕಡೆಯಕ್ಕೆ ನೂಕಲು
ನಿತ್ತ ವಿಚಾರವಿಲ್ಲದಂತೆ
ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ
ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ 3