ಬರುವುದೆಲ್ಲವು ಬಂದು ತೀರಿ ಹೋಗಲಿ
ಹರಿ ನಿನ್ನ ಸ್ಮರಣೆಯೆ ಸ್ಥಿರವಾಗಿರಲಿ ಪ
ಕಳ್ಳನೆಂದು ಎನ್ನ ಮರಕೆ ಬಿಗಿಯಲಿ
ಸುಳ್ಳನೆಂದು ಮೋರೆ ಮೇಲೆ ಉಗುಳಲಿ
ತಳ್ಳಿಕೋರನೆಂದು ಎಳದಾಡಿ ಒದಿಲಿ
ಎಲ್ಲಿನೋಡಿದಲ್ಲಿ ಹಾಸ್ಯಮಾಡಲಿ 1
ಡಂಭಕನಿವನೆಂದು ಬಿಡದೆ ನಿಂದಿಸಲಿ
ನಂಬದೆ ಜನರೆನಗೆ ಇಂಬುಗೊಡದಿರಲಿ
ಕುಂಭಿನಿಪರು ಎನ್ನ ಮುನಿದು ನೋಡಲಿ
ಇಂಬು ಸಿಗದೆ ನಾನು ತೊಳಲಿ ಬಳಲಲಿ 2
ಸತಿಸುತರೆನ್ನನು ಬಿಟ್ಟು ಹೋಗಲಿ
ಕ್ಷಿತಿಯೊಳೆನ್ನನು ಯಾರು ಸೇರದಂತಿರಲಿ
ಪತಿತಪಾವನ ಸಿರಿಪತಿ ಶ್ರೀರಾಮನ ಪೂರ್ಣ
ಹಿತವೊಂದೆ ಎನ್ನ ಮೇಲೆ ಬಿಡದಂತಿರಲಿ 3