ಪಾಲಿಸು ಪರಮಪಾವನ ಪದ್ಮಾವತೀರಮಣ
ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.
ಪಾಹಿಪಾರ್ಥಸಾರಥಿಅ.ಪ.
ಮದನಜನಕ ಮಹಿಮಾಂಬುಧಿ ನಿನ್ನ
ಪದಕಮಲವ ನಾ ಸ್ಮರಿಸದೆ ಎನ್ನ
ಮದಮುಖತನವನು ಒದರುವದೆನ್ನ
ಪದುಮನಾಭ ರಕ್ಷಿಸು ನೀ ಮುನ್ನ
ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ
ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ
ಇದಕೆ ನೀ ಊನ ತರುವೆ ಸಾಕು ಈ ಮರವೆ
ಒದಗಿಸು ಸರ್ವಮನಸಿನೊಳ್ ಪುದು-
ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-
ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ
ಮಧುಸೂದನ ಮಂದರಗಿರಿಧರ ನೀ-
ರದ ನಿಭ ನಿರ್ಮಲ ನಿಜರೂಪ ಗುಣ
ಸದನಾಚ್ಯುತ ರವಿಕುಲದೀಪ ನಿರ-
ವಧಿ ಆನಂದ ರಸಾಲಾಪ
ಬುಧಜನೋಪಲಾಲಿತ ಲೀಲಾಯತ
ಉದಧಿಶಾಯಿ ಮಾನದ ಮಧುಸೂದನ1
ನಾಮಸ್ಮರಣೆಯೆ ನರಕೋದ್ಧಾರ
ನೇಮವಿಲ್ಲೆಂಬುದು ನಿನ್ನ ವಿಚಾರ
ಸಾಮಾರ್ಥದ ಗುಣಕೆಲ್ಲನುಸಾರ
ಪಾಮರ ಮನಕಿದು ಈ ಗುಣಭಾರ
ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ
ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ
ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ
ಸಾಮಗಾನಲೋಲ ಸುಜನ
ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ
ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ
ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ
ನೀ ಮಾಡುವುದೆಲ್ಲವು ಸಹಜ ಗುಣ
ಧಾಮಾಶ್ರಿತ ನಿರ್ಜರಭೂಜ ಸುಜನ
ಸ್ತೋಮಾರ್ಕಾಮಿತ ವಿಭ್ರಾಜ
ಶ್ರೀಮಚ್ಛೇಷಾಚಲ ಮಂದಿರ ಸು-
ತ್ರಾಮಾರ್ಚಿತ ಸದ್ರಾಮ ಶ್ರೀರಾಮ2
ಉಡುವ ಸೀರೆಯ ಸೆಳೆಯಲು ದ್ರುಪಜೆಯ
ಕೊಡಲಿಲ್ಲವೆ ಬಹುವಸನ ಸಂತತಿಯ
ಹಿಡಿಯವಲಕ್ಕಿಗೆ ದ್ವಾರಕ ಪತಿಯ
ಕಡು ಸರಾಗವಾಯ್ತಿಂದಿನ ಪರಿಯ
ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ
ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ
ಕೊಡು ದಯವಿಟ್ಟು ಮುದದಿ ಕರುಣಾವುದಧಿ
ಕಡುಲೋಭಿತನ ಬಿಡು ಮಹರಾಯ
ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ
ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ
ಒಡೆಯ ಶ್ರೀ ಲಕ್ಷ್ಮೀನಾರಾಯಣ
ನಡುನೀರೊಳು ಕೈಬಿಡುವೆಯ ನೀ
ತೊಡಕೊಂಡ ಬಿರುದೇನಯ್ಯ ಈ
ಕಡು ಕೃಪಣತನ ಸಾಕಯ್ಯ
ಪೊಡವಿಯೊಳಗೆ ಪಡುತಿರುಪತಿಯೆಂಬ
ದೃಢಕಾರ್ಕಳದೊಡೆಯ ಶ್ರೀನಿವಾಸನೆ3