(ಇ) ಆತ್ಮನಿವೇದನೆ
ಏನು ಮಾಡಲಿ ವೆಂಕಟೇಶ ಈ ಬೆಳೆಯು
ಸೋನೆಯಿಲ್ಲದೆ ಉರಿದುದು ಪ
ನಾನಾ ಪ್ರಕಾರದೊಳು ಹಾನಿಯಾಯಿತು ಇರವು
ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ
ಮೂಡದೆಸೆಯಳು ಬಂದುದು, ಆ ಮಳೆಯು
ಬಡಗದೆಸೆಯಳು ಸುರಿದುದು
ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ
ನಡುವೆ ಬಿಡುವುದು ಯಾತಕೆ 1
ಕಟ್ಟುಕಡು ಮದಗ ಸಹಿತ, ಈ ಊರ ತಲೆ
ಗಟ್ಟಿನೊಳು ನಾ ಕಾಣೆನು
ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ
ದೃಷ್ಟಿಯಲಿ ನೋಡು ನೀನು 2
ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ
ಫಲವೆಲ್ಲ ಬೆಳೆ ಕೆಟ್ಟಿತು
ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು
ಎಳೆದೆಳೆದು ಕೊಲುವನಲ್ಲ 3
ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ
ಬಿಟ್ಟು ಪೋದುದು ಇಳೆಯನು
ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ
ಮುಟ್ಟಿ ನೋಡುವರಿಲ್ಲವೊ 4
ಹದಿನಾಲ್ಕು ಲೋಕವನು ನೀ ನಿನ್ನ
ಉದರದೊಳಗಳವಟ್ಟಿಹೆ
ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ
ಉದುರದೇತಕೆ ಇಳೆಗೆ ಮಳೆಯು 5
ಎಲ್ಲ ಬೇಡಿಯೆ ಕೊಂಬರು, ಈ ಹರಕೆ
ಯಲ್ಲಿ ಅಂತರಬಾರದು
ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು
ಬೆಲ್ಲವಾಗಿಹ ಮಳೆಯನೆರೆಯೊ 6
ನೀಲಮೇಘಶಾಮ ವರ್ಣ, ಕಾಣಲಾ
ಮೂಲೋಕದೊಡೆಯಾ ನಿನ್ನ
ಕಾಲಮೇಘವು ನಿನಗೆ ದೂರವಾಗುವುದುಂಟೆ
ಆಲಸ್ಯ ಮಾಡಬೇಡ 7
ಬಡವರೆಲ್ಲರು ಕೂಡಿಯೇ, ಒಪ್ಪು ಕೈ
ವಿಡಿದು ಬೇಡಿಯೇ ಕೊಂಡೆವು
ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ
ಒಡೆಯ ದಯದೋರೊ ನೀನು 8
ಸ್ವಾಮಿ ನಿನ್ನಯ ನಾಮವು, ಜನರಿಂಗೆ
ಕಾಮಿತಾರ್ಥವನೀವುದು
ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು
ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9