ಕಡಲಶಯನ ಹರಿಯ ತೊಡೆಯಲ್ಲಿ
ಮಡದ್ಯೇರಿಬ್ಬರು ಕುಳಿತು ಪ
ಪನ್ನಂಗಶಯನ ಕೇಳೆ ಸ್ವಾಮಿ ನೀ
ಎನ್ನ ಮನೆಗೆ ಏಳೊ
ನಿನ್ನ ಪಾದಕ್ಕೆ ಎರಗುವೆನೆಂದು ಭಾಮೆ ಕೈ-
ಯನ್ನು ಮುಗಿದಳಾಗ 1
ಎನ್ನ ಮನೆಯಲ್ಲಿದ್ದ ಶ್ರೀಹರಿ-
ಯನ್ನು ಕರೆಯಲವರ
ಕಣ್ಣೇಸೆನುತಲಿ ಕರ್ಣಿ(ನ್ಯೆ?) ರುಕ್ಮಿಣಿ ಕೋಪ-
ವನ್ನು ಧರಿಸಲಾಗ 2
ಎಷ್ಟು ಹಣವ ನೀನು ಕೃಷ್ಣಗೆ
ಕೊಟ್ಟು ಕೊಂಡಿ ಹೇಳೆ
ದಿಟ್ಟತನದ ಮಾತಾಡೋ ರುಕ್ಮಿಣಿ ನಿನ್ನ
ಶ್ರೇಷ್ಠತನವೇನ್ಹೇಳೆ 3
ಹತ್ತು ಆರು ಸಾವಿರದಷ್ಟ
ಭಾರ್ಯೇರವೊಳಗೆ
ಸತ್ಯಭಾಮೆ ಉತ್ಕøಷ್ಟ ಚೆಲುವೆಯೆಂದು
ಕೃಷ್ಣ ನಿನ್ನಲ್ಲಿಹನೆ4
ಹದಿನಾಲ್ಕು ಲೋಕದಲಿ ಹರಿ
ಪಾದಾಂಬುಜವ ಕಾಂಬುವೋರಿಲ್ಲೆ
ಯದುನಾಥನ ಎದೆ ಮ್ಯಾಲ್ಹತ್ತಿರುವೋದು
ಇದು ಸೋಜಿಗವಲ್ಲೆ 5
ಇಷ್ಟೆ ಸೋಜಿಗವೆಂದು ಆಡಲು
ದಿಟ್ಟೆ ನಿನಗೆ ಅರಿದೆ
ಅಷ್ಟದಿಕ್ಪಾಲಕರನೆ ಓಡಿಸಿ ವೃಕ್ಷ
ಕಿತ್ತು ಒದರು(ರುವು?) ದಲ್ಲೆ 6
ಜಲಪ್ರಳಯ ಕಾಲದಲಿ ಜನರಿಲ್ಲದ
ಅಂಧಕಾರದಲಿ
ಎಲೆಯಾಗಾ ಪರಮಾತ್ಮನ ಮನವ ನೀ ಮೊ-
ದಲೆ ಒಲಿಸಿಕೊಂಡೆ 7
ಕಾದು ಸೇವಿಸೆ ಹರಿಯ ಪಾದದ-
ಲ್ಲಾದರವಿಲ್ಲದಲೆ
ದಾನ ಮಾಡುತ ಮುನಿಹಿಂದಟ್ಟಿದರ್ಹರಿ
ಹ್ಯಾಗೆ ಬರುವನ್ಹೇಳೆ 8
ಮೂರು ಲೋಕದ ದೊರೆಯ
ಮೂರೆಲೆ ತುಳಸಿ-
ಸರಿಯ ಮಾಡಿ ಮುಕುತಿದಾಯಕ ಕೈವಶವಾ-
ಗಿರಲು ನೀ ಸಕಲ ಮಾಯವ ಬಲ್ಲೆ 9
ಪಟ್ಟದ್ವೊಲ್ಲಭೆ ನಾನು ಕೃಷ್ಣಗೆ
ಮೆಚ್ಚಿ ಬಂದೆಯೆ ನೀನು
ಅಚ್ಚುತ ತಾ ಪರಮಾನುಗ್ರ(ಹ)ವ ಮಾಡಿ ಬಂ-
ದಿಚ್ಛೆಲಿರುವ ತಾನು10
ಮಾತಾಪಿತರು ಅನುಜನನ್ವಂಚಿಸಿ
ಈತಗ್ವಾಲೆಯ ಬರೆದು
ಯಾತಕಂಜಿಕೆ ವಲಿಸ್ಯೋಡಿ ಬಂದವಳೆಂದು
ಕೀರ್ಹೊಗಳುವುದಲ್ಲೆ 11
ತಂದು ಕೊಡಲು ಮಣಿಯ ಸಭೆಯೊಳು
ಅಂದು ತಗ್ಗಿಸಿ ತಲೆಯ
ನಿಂದ್ಯದ ಮಾತಿಗೆ ತಂದು ನಿಮ್ಮಯ್ಯ
ಮುಂದಿಟ್ಟು ಪೋದನೆ ನಿನ್ನ 12
ಕೇಳೊ ಕೇಳೊ ನುಡಿಯ ನೀನೀ-
ರೇಳು ಲೋಕದ ಒಡೆಯ
ಹೇಳೋ ಬುದ್ಧಿ ನಿನ್ನಯ ವಲ್ಲಭೆ ಮಾತಾ-
ಡೋಳೊ ನಿರ್ಭಿಡೆಯ 13
ರಕ್ಕಸಾಂತಕ ಕೇಳೊ ನಿನ್ನ
ಚಿಕ್ಕವಲ್ಲಭೆ ಮ(ಹಿ)ಮೆ
ಉಕ್ಕಿ ಉಕ್ಕಿ ಎನ್ನ ಮ್ಯಾಲೆ ಬರಲು ನಿನ-
ಗಕ್ಕರ ತೋರುವುದೆ 14
ಆರ್ಯಳೆಂದು ನಾನು ತಾಳಿದೆ-
ನಕ್ಕ ರುಕ್ಮಿಣಿ ಮಾತ
ಏರಿ ಏರಿ ಏನ್ನಮ್ಯಾಲೆ ಬರಲು ಇದು
ನ್ಯಾಯವೇನೊ ನಿನಗೆ 15
ನಾಲ್ಕು ತೋಳಿನಿಂದ ಆಲಿಂಗಿಸಿ
ಕಾಂತೆಯರಿಬ್ಬರನು
ಯಾತಕಿಂಥ ಕದನವು ಘನವಾಯಿತು
ಸಾಕು ಸಾಕುಯೆನುತ16
ವಾರಿಜಾಕ್ಷ ಕೇಳೋ ನಾರದ-
ರ್ಹೂಡಿದರೀ ಜಗಳ
ಪಾರಿಜಾತ ಸರಿಸವತಿಗೆ ಕೊಟ್ಟ-
ರಿನ್ಯಾರು ಸೈರಿಸೋರ್ಹೇಳೊ 17
ನಂದನವನ ತರುವ ನಾ
ತಂದಿಟ್ಟೆನಂಗಳದಲ್ಲೆ
ಅಂದಿಬ್ಬರನಾನಂದವ ಬಡಿಸಿದ
ಚೆಂದದಿಂದಲಿ ನಗುತ 18
ಭಾಮೆ ರುಕ್ಮಿಣಿ ಸಹಿತ ನಡುವೆ
ಭೀಮೇಶ ಕೃಷ್ಣನು ಕುಳಿತ
ಕಾಮನಯ್ಯನ ಚರಿತ್ರೆಯ ಪಾಡ-
ಲಮೃತ ಪಾನವು ನಿರುತ 19