ಏಕ ಚಿಂತಿಸಲಯ್ಯ ಈ ಜಗದ ಸುಖಕಾಗಿ
ಸಾಕು ಇದರೊಳು ಸುಖದ ಲೇಶವನು ಕಾಣೆ ಪ
ಒಂದು ಸುಖ ಬಯಸಿದೊಡೆ ಹಿಂದೆ ನೂರೆಂಟಾಗಿ
ಸಂದಣಿಪ ದುಃಖಗಳು ಬಂದು ಒದಗುವವಿದಕೆ
ಎಂದಿಗೂ ಬಯಸೆನಾ ಈ ತೆರೆದ ಸುಖವನ್ನು
ಹಿಂದಿನಾ ಕರ್ಮದಂತಾಗುತಿರುವುದಕೆ 1
ಮೊದಲು ಸವಿಯಾಗಿಹುದು ತುದಿಯಲಿದು ವಿಷವಹುದು
ಬದಲಾಗುತಿಹ ಇಂಥ ಸುಖ ಬೇಡವೆನಗೆ
ಮೊದಲುಕೊನೆ ಇಲ್ಲದಿಹ ಸದಮಲಾನಂದವಹ
ಪದವ ಮರೆಯಿಸುತಿರುವದಿದು ಬೇಡವೆನಗೆ 2
ಅನಿಸಿಕೆಯೆ ಕೂಡಿರುವ ಈ ಸುಖವು ನಿಜವಲ್ಲ
ಮನವಾಣಿಗಳಿಗಾಚೆಗಿಹ ಸುಖವು ನಿಜವು
ತಾನೆ ಸುಖರೂಪನೆಂದನಿತರೊಳು ನಿಶ್ಚಯಿಸಿ
ಜ್ಞಾನಿಶಂಕರನೆ ನಾನಾದ ಮೇಲಿನ್ನು 3