ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು |
ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ
ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು |
ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1
ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು |
ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2
ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು |
ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3