ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು ಪರಿ ನೆಲವನುಳಲಿಬೇಕು 1 ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು 2 ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ 3
--------------
ವಿದ್ಯಾಪ್ರಸನ್ನತೀರ್ಥರು