ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ
ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ
ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ
ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ
ದೂರಿಸುವಿ ಮಹನೀತಿ ಘೋರಿಸುವಿ ಬಡವರನು
ಕಾರಿಸುವಿ ತಿಂದನ್ನ ಧಾರುಣಿಯೊಳು 1
ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ
ನರಸುವಿ ಎಡಬಲದಿ ಪರಿಪರಿಯ ಜನರ
ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್
ಮರೆಸುವಿ ಮಹಿಮರ ಸಂದರುಶನದ ಸುಖವ 2
ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ
ಸಾಧುಸಜ್ಜನರ ನಿಜಬೋಧ ತೋರಿಸುವಿಯೋ
ಭೇದನಿಕ್ಕುತ ವೈರ ಸಾಧಿಸುತ ಪರಲೋಕ
ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3
ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು
ನುಡಿಸುವಿ ಕಡೆತನಕ ಕಡುದುಗುಡ
ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ
ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4
ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ
ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ
ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ
ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5