ಎಲೆ ಎಲೆ ಎಲೆ ಮುದಿಮೂಳಿ ನಿನ್ನ
ಕಲ್ಮಷ ಇನ್ನು ತೊಳಿವಲ್ಲಿ ಪ
ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ
ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ
ಹಿಡಿದಿದ್ದಿ ಸುಡುಗಾಡ ಪಥವ ಇನ್ನು
ಬಿಡವಲ್ಲಿ ಮಾಯಮತವ
ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ
ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1
ಇನತು ನಾಚಿಕಿಲ್ಲ ರೋಗಿ ನೀನು
ತಿಣಿತಿಣಿಕಾದಿ ಮುದಿಗೂಗಿ
ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು
ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2
ಹಣವೆಷ್ಟಿರಲು ನಿನ್ನದಲ್ಲ ನಾಳೆ
ಮನೆಮಾರು ಬರದು ಹಿಂಬಲ
ಮಣಿಕಟ್ಟೆಲವು ಮುರಿದ್ಹಣಿಯುವಾಗ
ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3
ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ
ಖೊಟ್ಟಿ ಕಡೆಯಿಲ್ಲಮ್ಮ
ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ
ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4
ಭಿನ್ನ ಭೇದಗಳನ್ನು ಕಡಿ
ನಿನ್ನ ಒಡಲೊಳು ತಿಳಕೊಂಡುನೋಡಿ
ಧನ್ಯ ಶ್ರೀರಾಮನ ಉನ್ನತ ಚರಣ
ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5