ವೆಂಕಟೇಶ ನಿನ್ನ ನಂಬಿದೆ ಎನ್ನ
ಸಂಕಟವನು ಪರಿಹರಿಸಯ್ಯ ನೀನು ಪ
ಒಡಲೆಂಬ ಕಡಲೆಡೆಗೊಂಡಿಹ ಹಡಗು
ಕಡೆಯ ಕಾಣ ಬಹು ಜಡದಿಂದ ಗುಡುಗು
ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು
ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1
ಅಣುರೇಣು ತೃಣಕಾಷ್ಠದೊಳಗಿದ್ದು ನೀನು
ಕ್ಷಣ ಕ್ಷಣ ಆರೈವ ಗುಣ ನಿನ್ನದೇನು
ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು
ಮಣಿವೆನು ಮನ್ನಿಸು ವರ ಕಾಮಧೇನು 2
ನಾರಾಯಣ ನರಹರಿ ಜಗನ್ನಾಥ
ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ
ಸಾರಿದವರ ಸಂಸಾರದ ದಾತ
ಮಾರಿದ ಮನವಕೊಂಬರೆ ನೀನೆ ಪ್ರೀತ 3
ಉತ್ತಮವಾದ ಶ್ರೀಶೈಲ ನಿವಾಸ
ಭಕ್ತರ ಸಲಹುವ ಬಿರುದುಳ್ಳ ಈಶ
ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ
ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4
ವರಾಹತಿಮ್ಮಪ್ಪನು ಒಲಿದೆನ್ನ ಕರೆದು
ಆರಿದ ಬÁಯೊಳು ಅಮೃತವನೆರೆದು
ದೂರವಾಗದೆ ಅಡಿಗಡಿಗೆನ್ನ ಹೊರೆದು
ಏರುಗಂಡಪರಾಧ ಎಲ್ಲವ ಮರೆದು 5