ನಿರಂಜನ ಸ್ವಾನುಭವವ ಪಡೆದು ನೋಡು ಪ
ಬಿಡು ದೇಹದಿ ಆತ್ಮಭಾನ
ಪಡೆ ಗುರುವಿನ ದಿವ್ಯ ಜ್ಞಾನ
ನುಡಿ ಮನಸಿಗೆ ನಿಲುಕದಿರುವ
ಕಡೆ ಇಲ್ಲದ ಸ್ಥಿತಿಯ ನೋಡು
ಒಡಲುಪ್ರಾಣಮನಾದಿಗಳು
ಜಡವಾದವು ಎಂದು ತಿಳಿದು
ದೃಢನಿಶ್ಚಯದಿಂದ ಕಳೆಯೆ
ಕಡೆಗುಳಿಯುವ ಮೂಲರೂಪ 1
ಪರಮಾತ್ಮನ ನೋಡುವುದಕೆ
ಹೊರಗೆಲ್ಲಿಯು ಹೋಗಬೇಡ
ಭರಿತನವನು ವಿಶ್ವದಲ್ಲಿ
ಇರನೆ ನಿನ್ನ ಹೃದಯದಲ್ಲಿ
ಮರೆಯದೆ ಈ ನುಡಿಯ ಬೇಗ
ಅರಿತುಕೊಳ್ಳು ನಿನ್ನ ರೂಪ
ಪರಮಪದವ ಪೊಂದುವಿ ನೀ
ಗುರುಶಂಕರನುಕ್ತಿಯಂತೆ 2