ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು ಜ್ಞಾನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ 1 ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ2 ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು ವಿಷವುಂಬ ಪಾತಕಿಗೆ 3 ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ ಮತ್ತೆ ಕುಲಹೀನದಲಿ ಅನ್ನ ತಿಂದು ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ 4 ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ಕಾಯ ವಿಜಯವಿಠ್ಠಲರೇಯ ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು 5
--------------
ವಿಜಯದಾಸ
ಸುರರ ಮೊರೆಯನೆಲ್ಲ ಕೇಳಿ ತರಳನೆ ವನದಿ ನರಹರಿ ರೂಪವ ತಾಳಿ ತೋರುತ ಧಾಳಿ ದುರುಳನ ಒಡಲನು ನಖದೊಳು ಸೀಳಿ ಕರುಳ ಮಾಲೆಯನು ಕೊರಳೊಳು ಧರಿಸಿದ ಸಿರಿವರಗಾರತಿಯ ಬೆಳಗಿರೆ ಶೋಭಾನೆ 1 ದುರಿತಾದ್ರಿಗಳನು ತರಿವ ಸ್ಮರಿಸುವ ದಾಸರ ಪೊರೆವ ಕರುಣಾಮೃತವನು ಶಿರದೊಳು ಸುರಿವಾ ಅರಿಪುಂಜವ ಕತ್ತರಿಸುತ ಮೆರೆವ ಕರವ ಪ್ರಲ್ಹಾದನ ಶಿರದೊಳಗಿರಿಸಿದ ಸರಸ ವರಗಾರತಿಯ ಬೆಳಗಿರೆ ಶೋಭಾನೆ 2 ಸುಲಲಿತ ಪದ್ಮೆಯ ವಕ್ಷ ಸ್ಥ ಳದಲಿ ನೆಲೆಗೊಳಿಸಿದಗೆ ಕಳವಳಿಸುವ ಭಕ್ತೌಘನ ಬೇಗದಿ ಸಲಹುತಹೋಬಲ ನಿಲಯದಿ ಶೋಭಿಪ ಚೆಲುವ ಶೇಷಗಿರಿ ವರನಿಗೆ ರತ್ನದ ತಳಿಗೆಯೊಳಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ1ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ 2ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ 3ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ 4ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ |ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ 5
--------------
ಪುರಂದರದಾಸರು