ಬೆಳಿಯೋ ಬೆಳಿ ಮನವೇ
ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು |
ಇಳೆಯೊಳು ಯಣಿಗಾಣದ್ಹಾಂಗೆ 1
ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು |
ಜರಿದು ಸಂಗಿಗಳನ್ನೆಲ್ಲಾ 2
ವಿವೇಕವೇಯಂಬಾ ನೇಗಿಲ ಎಂಟು |
ಭಾವವೆಂಬೆತ್ತುಗಳಿಂದ 3
ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ |
ಒಡನೆ ಶಿಕ್ಷದಿ ನಡೆಸುತಾ 4
ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ |
ಅನನ್ಯ ಭಾವ ಕೂರಿಗೆಯಿಂದಾ 5
ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ |
ಭರದಿ ಬಿತ್ತಿ ನಾದುವಂತೆ 6
ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು|
ಧನಗಾಳ ತುಂಬಿಡುವಂತೆ 7
ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ |
ಪರಮ ಜಾಗೃತಿಯ ಕವಣಿಯಿಂದಾ 8
ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ |
ಸಾರಿಹ ಶೃತಿ ವಾಕ್ಯದಿಂದ 9
ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ |
ತೂರಿ ಅಹಂಭಾವ ಹೊಟ್ಟವನು 10
ದೈನ್ಯವನು ಹಿಂಗಿ ಬಳಕೊಂಡು
ಅನ್ಯರಾ ಮರೆ ಹೋಗದಂತೆ 11
ಪರಿಪೂರ್ಣಾದ ಬಳಿಕ ಒಕ್ಕಲು ತನಕ |
ಮರುಳೆ ನೀ ಸಿಕ್ಕದಿರು ಕಂಡ್ಯಾ 12
ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು
ಗುರು ಮಹಿಪತಿ ವಲುಮೆಯಿಂದಾ 13