ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ
ಆವದು ಸ್ಥಿರವೆಲೋ ಮಾಯವಿದೆಲ್ಲವು
ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ
ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ
ಅರ್ತುವಿಚಾರಿಸು ಸಾರ್ಥಕವಾವುದು
ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ 1
ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ
ಗತಿಸಲು ಭಾಗ್ಯವು ಹಿತದೋರಿದವರೇ
ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ 2
ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು
ಇಂದು ನಾಳೆನ್ನದೆ ತಂದೆ ಶ್ರೀರಾಮನ
ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ 3