ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ
ಸುರರು ನಲಿಯುತ ಶಿರವ ಬಾಗಿ
ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ
ಹರಿಯ ಮಡದಿಯೆ ಅ.ಪ.
ಕ್ಷೀರವಾರಿಧಿ ತನಯೆ ನಿನ್ನಯ ದೇಹ
ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ
ವರ ಸುದರ್ಶನ ಶಂಖಹಸ್ತದಿ
ಮೆರೆಯುತಿರೆ ಭಕುತರನು ಸಲಹಲು
ಕರವೀರಪುರ ನಿಲಯದಿ ನೆಲಸಿ
ವರದಭಯ ಹಸ್ತವ ತೋರುತಿರ್ಪೆ 1
ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ
ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ
ವನಜಸಂಭವೆ ನಿನ್ನ ಒಂದರೆ-
ಕ್ಷಣವು ಬಿಡದಲೆ ತನ್ನ ಉರದೊಳು
ದನುಜಮರ್ಧನ ಧರಿಸಿಕೊಂಡು
ತನುವು ಮನವನು ನಿನಗೆ ತೆತ್ತಿಹ 2
ರಂಗೇಶವಿಠಲನ ರಾಣಿ ಪಂಕಜಪಾಣಿ
ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ
ಮಂಗಳಾಂಗಿಯೆ ಖೂಳ ಕುಜನರ
ಸಂಗಬಿಡಿಸುತ ತವ ಪದ ಸರೋ
ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3