(ಅನಂತಚತುರ್ದಶಿಯ ದಿನದ ಪ್ರಾರ್ಥನೆ)
ಪದ್ಮನಾಭ ಪರಿಪಾಲಿಸು ದಯದಿಂದ
ಪದ್ಮಜಾದಿ ವಂದ್ಯ ಪರಮ ದಯಾಳೊ
ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ
ಸದ್ಮ ವೃತ್ತಿಪದಪದ್ಮವ ತೋರೊ ಪ.
ಚಿಂತಿತದಾಯಕ ಸಂತರ ಕುಲದೈವ
ಕಂತು ಜನನಿಯೊಡಗೂಡಿ ನೀನು
ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು-
ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1
ಆದಿ ಮಧ್ಯಾಂತವಿದೂರ ನಿನ್ನಲಿ ಮಹ
ದಾದಿ ತತ್ವಗಳೆಲ್ಲ ನಿಂತಿಹವು
ಆದಿ ಭೌತಿಕ ಮೊದಲಾದ ತಾಪಗಳನ್ನು
ಶ್ರೀದ ನೀ ಬಿಡಿಸಲು ಸದರವಾಗಿಹವು 2
ಒಂದರಿಂದೊಂದಾದರಿಂದ ಮೂರು ಮೂರ್ತಿ
ಇಂದಿರೆ ಸಹಿತಾವಿರ್ಭೂತನಾಗಿ
ಮುಂದಿನ ಮಹದಾದಿ ತತ್ವವ ನಿರ್ಮಿಸಿ
ನಿಂದನಂತಾಸಂತರೂಪನಾದವನೆ 3
ಭವ ಚಕ್ರದೊಳು ತಂದು
ನವ ನವ ಕರ್ಮಗಳನೆ ಮಾಡಿಸಿ
ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು
ನಿತ್ಯ ತೃಪ್ತನಾಗಿರುವಿ 4
ಮಛ್ವಾದ್ಯನಂತವತಾರಗಳನೆ ಮಾಡಿ
ಸ್ವೇಚ್ಛೆಯಿಂದ ಸುಜನರ ಸಲಹಿ
ಕುಚ್ಛಿತ ಜನರಿಗೆ ತುಚ್ಛಗತಿಯನೀವೆ
ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5
ನಾನಾವತಾರದಿ ನಂಬಿದ ಸುರರಿಗೆ
ಆನಂದವಿತ್ತು ರಕ್ಷಿಪೆ ಕರುಣದಿ
ದಾನವರಿಗೆ ಅಧ:ಸ್ಥಾನವ ನೀಡುವಿ
ಮಾನವರನು ಮಧ್ಯಗತರ ಮಾಡಿಸುವಿ 6
ಹಿಂದೆ ಮುಂದಿನ ಭವದಂದವ ತಿಳಿಯದ
ಮಂದಾಗ್ರೇಸರ ನಾನಾದೆಂಬುದನು
ಅಂಧಕರಾರಣ್ಯದಿಂದ ಮೂಢನಾದಂ
ದಿಂದ ಬಿನ್ನೈಪೆನು ಇಂದಿರಾಧವನೆ 7
ಮಾಡುವ ಕರ್ಮವು ನೋಡುವ ವಿಷಯಗ-
ಳಾಡುವ ಮಾತು ಬೇಡುವ ಸೌಖ್ಯವು
ನೀಡುವ ದಾನವೋಲ್ಯಾಡುವ ಚರ್ಯವ
ನೋಡಲು ತಾಮಸ ಪ್ರಹುಡನಾಗಿಹೆನು 8
ಆದರು ನಿನ್ನಯ ಪಾದಾರವಿಂದ ವಿ-
ನೋದ ಕಥಾಮೃತ ಪಾನದೊಳು
ಸ್ವಾದ ಲೇಶದಾದರ ತೋರ್ಪದ-
ನಾದಿ ಮೂರುತಿ ನೀನೆ ತಿಳಿಸಬೇಕದನೂ 9
ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ
ಪದವ ಕಾಣುವೆನೆನುತೊದರುವೆನು
ಹೃದಯ ಮಂಟಪದಿ ನೀ ಹುದುಗಿರುವುದರಿಂದ
ಕದವ ತೆರೆದು ತೋರೊ ವಿಧಿಭವವಿನುತಾ 10
ಕನ್ನೆ ಸುಶೀಲೆಯ ಕರಸೂತ್ರ ರೂಪದ
ನಿನ್ನ ತಿಳಿಯದೆ ಕೌಂಡಿಣ್ಯನಂದು
ಮನ್ನಿಸದಿರೆ ಮದ ಮೋಹಗಳೋಡಿಸಿ
ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11
ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ
ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು-
ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12
ಅದು ಕಾರಣದಿಂದ ಪದುಮನಾಭ ನಿನ್ನ
ಪದ ಕಮಲಗಳಲಿ ರತಿಯನಿತ್ತು
ಸದರದಿ ಸಲಹಯ್ಯ ವಿಧುಶೇಖರಾರ್ಚಿತ
ಮದನನಯ್ಯ ಮರುದಾದಿ ವಂದಿತನೆ 13
ದೋಷರಾಶಿಗವಕಾಶನಾದರೂ ಯೆನ್ನ
ಶ್ರೀಶ ನಿನ್ನ ದಾಸದಾಸನೆಂದು
ಘೋಷವಾದುದರಿಂದ ಪೋಷಿಸಬೇಕಯ್ಯ
ಶೇಷಗಿರೀಶ ಸರ್ವೇಶ ನೀ ದಯದಿ 14