ಎಂದಿಗೆ ಕಾಂಬುವೆ ಇಂದಿರೇಶನೆ ನಿನ್ನ
ಪಾದ ಕೃಪೆಯ ಪ
ಒಂದರಲವ ನಿಂದು ಒಂದೇ ಮನದಿ ನಿನ್ನ
ಮಂದ ಭಾಗ್ಯನು ನಾನು ಅ.ಪ
ಎನ್ನ ಮನಸಿನ ಚೇಷ್ಟೆ ವರ್ಣಿಸಲಳವಲ್ಲ
ಕ್ಷಣಕೊಂದು ಪರಿಯಪ್ಪುದು
ಘನದೃಢ ಹರಿಪಾದ ನೆನೆಯುವುದು ನಿಮಿಷದಿ
ಎಣಿಯಿಲ್ಲದೈಶ್ವರ್ಯವನು ಭೋಗಿಸುವುದು 1
ಗಳಿಗೆಯೊಳ್ದಶಲಕ್ಷ ಸುಲಭದಿಂ ಗಳಿಸರ್ಥ
ಬಲವಾಗಿ ನಿಲಯದಿಟ್ಟು
ಲಲನೆಯೊಳೊಡಗೂಡಿ ಬಲುಸೌಖ್ಯ ಬಡುಕೊಂಡು
ಗಳಿಗೆಯೊಳ್ ದೇಶಾಂತರಕೆಳಸುವುದಭವ 2
ಅರಿಗಳಂ ಬಂಧಿಸಿ ಸೆರೆಯೊಳಿಟ್ಟರಲವದಿ
ಶಿರವರಿಪೆನೆನುತಿಹ್ಯದು
ಪರಮ ವೈರಾಗ್ಯದಿಂ ಚರಿಸುವುದರಲವದಿ
ಪರಲೋಕ ಸಾಧನದಿರುತಿಹ್ಯದಕಟ3
ದೃಢದಿ ನಡೆವುದು ನಿಮಿಷ ಪೊಡವಿಜನಕೆ ಸತ್ಯ
ನುಡಿಯು ಬೋಧಿಸುತಿಹ್ಯದು
ದೃಢತರಬಲದಿ ತಾ ಕಡುಗಲಿಯೆನಿಸೊಂದೇ
ಕೊಡೆಯಿಂದಲಾಳುವುದು ಪೊಡವಿಯಂ ಸಕಲ 4
ಕಾಮಿಸುತೀಪರಿ ಕಾಮಕೊಳಪಡಿಸೆನ್ನ
ಪಾಮರನೆನಿಸುವುದು
ಸ್ವಾಮಿ ಶ್ರೀರಾಮ ಎನ್ನ ಪಾಮರಮನಸಿನ
ಕಾಮಿತವಳುಕಿಸಿ ಪ್ರೇಮದಿಂ ಸಲಹಯ್ಯ 5