ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ
ನರಿಗಳ ಕೂಗಿಗೆ ಹುಲಿಯಂಜುವುದೆ
ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ
ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು
ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ
ಹೀನ ಜನರು ಅಪಮಾನವ ಬಯಸಲು
ನಾನಿಹೆನೆನ್ನುವ ಜಾನಕಿನಾಥನ 1
ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು
ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು
ಮುಂದೆ ಎನಗೆ ಬಲು ತೊಂದರೆಗಳಿರುವು
ವೆಂದು ಪೇಳುವರು ಮಂದರಧರನ 2
ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು
ಘನತೆ ಎಂತೆಂದು ಜರಿಯುತಲಿಹರು ಮನವನರಿಯರು
ಧನ ಪಿಶಾಚಿಯನು ಮನದಿಂದ ತೊಲಗಿಸಿ
ಮನದಲಿ ನೆಲಸಿಹ ವನರುಹ ನಯನನ 3
ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ
ಜಂಭದ ಮಾತ ನಂಬದೆ ಇರಲು ಹಂಬಲಿಸುವರು
ನಂಬುವ ಭಕುತರ ಹಿಂಬಾಲಿಸುತಲಿ
ಬೆಂಬಲಿವೀಯುತವ ಅಂಬುಜನಾಭನ 4
ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ
ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು
ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ
ಗತಿ ತೋರುತಲಿರೆ ಚತುರತೆಯೇತಕೆ 5