ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ