ಈ ಕ್ಷಿತಿಯ ಸಾರತರ ವೃಕ್ಷವನು ಕಂಡೆ ಪ
ರಾಕ್ಷಸಾಂತಕ ದೇವ ನೀ ವಿರಚಿಸಿರುವ ಅ.ಪ
ಅಡವಿಯೊಳಗೀವೃಕ್ಷಕಡಿಯ ಪಾತಿಯಿದು
ದೃಢದ ಬೇರುಗಳು ಮೂರು ರಸವು ನಾಲ್ಕು
ಪೊಡವಿಗಿಳಿದಿರ್ಪೈದು ಬಿಳಿಲುಂಟು ಕೊನೆ ಮೂರು
ಎಡೆವ ಪರೆಯೇಳಾ ಕೊಂಬೆಗಳೆಂಟು ಫಲವೆರಡು 1
ಮೂರು ಮುಮ್ಮಡಿ ರಂಧ್ರ ಐದರಿಮ್ಮಡಿ ಪರ್ಣ
ತೇರೈಸೆ ತೋರುವಾಕಾರ ಎರಡು
ಮೂರೆರಡರಿಂದೆಸೆವ ಸಾರಫಲಗಳನೆಲ್ಲ
ಓರಂತೆ ಭಕ್ಷಿಸುವ ಪಕ್ಷಿಯೊಂದುಂಟಯ್ಯ 2
ವೃಕ್ಷದಾ ಫಲಗಳನು ಭಕ್ಷಿಪುದನೀಕ್ಷಿಸುವ
ಪಕ್ಷಿ ನೀನಾಗಿರಲು ಪರಮಕೃಪೆಯಾ
ಪಕ್ಷಿಗಿತ್ತಾಗಲೊಂದೇ ಪಕ್ಷಿಯೆಂದೆನ್ನಿಸಿ
ಕುಕ್ಷಿಯನ್ನುಳಿದೈದಲರಿದೇ ಮಾಂಗಿರಿಯ ರಂಗ 3