ತಿರುವಲ್ಲಿಕೇಣಿ (ಚೆನ್ನೈ)
ದರುಶನ ಮಾಡುವ ಬಾಬಾರೋ ಪ
ಪರಮ ಪುರುಷನವ ಪಾರ್ಥನ ಸೂತನು
ವರಗೀತಾಮೃತವುಸುರಿದವನು ಅ.ಪ
ಶರನಿಧಿಯೊಳು ಮಿಂದು ಐತರುವವರಿಗೆ
ವರದಾಭಯಕರ ತೋರುವವನು
ಪರಮಾಚಾರ್ಯಗೆ ದರುಶನವಿತ್ತು
ಪರಭಕ್ತಿಯ ಸಾರಿದನಿವನು 1
ಚಾರು ವೇದಂಗಳ ತುರಗವ ಗೈದ
ಧಾರುಣಿಯನು ರಥಹೂಡಿದನು
ಮರುತಾತ್ಮಜನನು ಧ್ವಜಕೇರಿಸಿದನು
ದುರುಳ ಕೌರವನ ಧುರದಿ ಸೋಲಿಸಿದನು2
ಹತ್ತವತಾರದಿ ಬಂದವನಿವನೇ
ಮತ್ತದೈತ್ಯರನೆಲ್ಲ ಕೊಂದವನಿವನೇ
ಉತ್ತಮಭಕ್ತರ ಕಾಯಲು ಮಾಂಗಿರಿ
ಅತ್ತ ನಿಂದಾ ರಂಗನಾಥನು ಇವನೇ 3