ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ
ಕಾಲಭೈರವ ನುತಿಪೆ ನಾ ಸತತ
ಕಾಲಕಲ್ಪಿತ ಲೀಲೆಯರಿತು ಸು-
ಶೀಲತನವನು ಮೆರೆಯಲೋಸುಗ
ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ
ಮೂಲಿಕಾ ಶ್ರೀನಿವಾಸ ಭೈರವ 1
ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-
ವೀರ ಶ್ರೀರಾಮನ ಸೇತು ನೋಡುತ್ತ
ಧರೆಯ ಸಂಚರಿಸುತ್ತ ಬರುತಿರೆ
ಮಿರುಪ ಶೇಷಾಚಲ ನಿರೀಕ್ಷಿಸಿ
ಭರದಿ ಗಿರಿಮೇಲಡರಿ ಶ್ರೀಶನ
ಚರಣಕಾನತನಾಗಿ ಸ್ತುತಿಸಿದೆ 2
ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ
ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ
ತ್ವರಿತದಿಂ ನೀನೆಲ್ಲ ದೇಶದ
ಪರಿಪರಿಯ ಕಾಣಿಕೆಯ ತರಿಸುತ
ಹರಿಯ ದರುಶನಗೈವ ಮೊದಲೆ
ಹರುಷದಿಂದಲಿ ಪೂಜೆಗೊಂಬುವೆ 3
ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ
ಧರಿಸಿ ಮೃದುತರವಾದ ವಾಕ್ಯದಲಿ
ಕರೆಸಿ ಒಬ್ಬೊಬ್ಬರ ವಿಚಾರಿಸಿ
ಸರಸದಿಂದಲಿ ಪೊಗಳಿಕೊಳ್ಳುತ
ನರರ್ಗೆ ಸೋಂಕಿದೆ ಭೂತಪ್ರೇತದ
ಭಯಗಳನು ಪರಿಹರಿಸಿ ಪಾಲಿಪೆ 4
ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ
ಖ್ಯಾತ ವೆಂಕಟಪತಿಗೆ ಸಖಿಯಷ್ಪ
ಖ್ಯಾತಿಯಿಂ ದೊರೆಯಿದಿರಿನಲಿ ಸಂ-
ನಿಧಿಸನ್ನುತನಾಗಿ ಮೆರೆದಿಹೆ
ಓತು ಕರುಣದೊಳೊಲಿದು ಪಾಲಿಪ
ದಾತ ಲಕ್ಷ್ಮೀನಾರಾಯಣಾಪ್ತನೆ 5