ಕಾಲವೆಂತು ಕಳೆಯಲೆನ್ನಯ್ಯ ಪ
ಕಾಲಕಳೆಯಲೆಂತು ನಾನು
ತಾಳಿಮೂಗುತಿ ಕಾಣದೊನಿತೆಯ
ಹಾಳುಮುಖವ ನೋಡೆವೆಂದು
ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ
ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ
ಹೇಳಲಳವಲ್ಲ ಸೇರಿ ವಿಧ ವಿಧದಿ
ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ
ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ
ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು
ಆಳುವಂಥ ಮೂಲಪುರಷನಿಲ್ಲದಿನ್ನು 1
ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ
ಮೂರು ಮಂದಿ ಊರ ಬೀದಿಯೊಳಗೆ
ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ
ಚೋರನೋರ್ವನು ಮೀರಿ ಬಾಧಿಪ
ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ
ಪಾರುಗಾಣೆನು ವ್ರತದಿ ಇನ್ನು 2
ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ
ಸತಿಗೆ ಪರಮ ಗತಿಯ ಕೊಡಲಿಕ್ಕೆ
ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ
ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ
ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು
ಪತಿತ ಪಾವನೆನ್ನ ಪ್ರಾಣ ಶ್ರೀರಾಮ 3