ಯಾರಿರಬಹುದೀತ ಗೆಳತೀ
ಯಾರಿರಬಹುದೀತ ಪ
ಯಾರೆಂದರಿಯದೆ ಪೋಗದೆ ಕೊರತೆ
ಯಾರಿರಬಹುದೀತ ಅ.ಪ
ಸಾವಿರ ಸಂಖ್ಯೆಯ ಗೋವಳರಿದ್ದರೂ
ಯಾವನಿಗೀ ವಿಧ ಠೀವಿಯಿರುವುದೇ
ಹಾವಭಾವಗಳ ನೋಡಲು ಈತನ
ಗೋವಳ ವೇಷವದಾವ ಕಾರಣವೋ 1
ನಮಗೇತಕೆ ಈತನ ಗೋಜೆಂದರು
ಕಮನೀಯನ ನೋಡುತ ನೋಡುತ ಬಲು
ಮಮತೆಯು ಮನದಲಿ ಏರುತಲಿರುವುದು
ಕಮಲನಯನೆ ನಾ ನಮಿಸುವೆ ಪೇಳೆ 2
ಸರಳನೋ ದುರುಳನೋ ಅರಿಯುವುದೆಂತೇ
ಕರೆಯದೆ ಹೋದರೆ ಜರಿಯಲುಬಹುದೇ
ಮುರಳಿಯ ನಾದದ ಕರೆ ಬಂದರೆ ನಾ
ಬರವೆನೆಂದರು ಹೇ ಸರಸ ಪ್ರಸನ್ನ 3