ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ |
ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ
ಶರಣು ಶರಣು ಗುರುವೇ ಶರಣರ ಸುರತರುವೆ |
ಶರಣರ ಹೃದಯದೊಳಗಿರುವೇ ಕೋಲೆ |
ಅನುದಿನ |
ಕರುಣದ ಮಳೆಯಾಗರೆವುತ ಕೋಲೆ 1
ಕರಣ ತೃಯದಿನಂಬಿ ಸ್ಮರಣೆಯ ಮಾಡಲು |
ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ |
ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ
ಕರಣದೊಳಗೆ ಬಯಕೆ ನಿಲದಂತೆ ಕೋಲೆ 2
ಚರಣ ಸರಸಿಜಕ ಶರಣ ಹೋಗಲು ಜನ್ಮ |
ಮರಣದ ಭಯಕಂಜಿ ಜನರು ಕೋಲೆ |
ಮರಣದ ಭಯಕಂಜಿ ಜನರು ಬರೆ ಕಂಡು |
ಕರುಣಾ ಕಟಾಕ್ಷದಿ ನೋಡುವ ಕೋಲೆ 3
ಕರದಿಂದ ಪಿಡಿದವನ ತರಣೋಪಾಯದ ಬೋಧಾ |
ಭರದಿಂದ ಬೀರುವೆ ಮನಸಿಗೆ ಕೋಲೆ |
ಭರದಿಂದ ಬೀರುವೆ ಮನಸಿಗೆ ಭವದೊಳು |
ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4
ಜ್ಞಾನವೆಂಬಂಜನೆ ಸೂನಯನಕ ಊಡಿ |
ಹೀನ ಅಜ್ಞಾನವ ಹರಿಸೂವ ಕೋಲೆ
ಹೀನ ಅಜ್ಞಾನವ ಹರಿಸುವೆ ಬೇಗದಿ |
ಸ್ವಾನುಭವದ ಸುಖ ಬೀರುವೆ ಕೋಲೆ 5
ನಾನಾ ಹಂಬಲವನ ಏನೆನುಳಿಯದ್ಹಾಂಗ |
ತಾನಿದ್ದ ಬದಿಯಲಿ ಇಹಪರ ಕೋಲೆ |
ತಾನಿದ್ದ ಬದಿಯಲಿ ಇಹಪರ ಸುಖಗಳ |
ನೀನಿದಿರಿಡುತಿಹೆ ಸದಮಲ ಕೋಲೆ 6
ಎಂಟು ಸಿದ್ಧಿಗಳು ಉಂಟಾಗಿ ಬಂದರೆ |
ವೆಂಟಣಿಸಿ ಅದರ ಕಡೆಗೇ ಕೋಲೆ |
ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ |
ಬಂಟನೆಯ ಮಹಿಮೆಯ ಜಗದೊಳು ಕೋಲೆ 7
ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು |
ಎನ್ನಳವಲ್ಲಾ ಜಗಕಲ್ಲಾ ಕೋಲೆ |
ಎನ್ನಳವಲ್ಲಾ ಜಗಕಲ್ಲಾ ಸದ್ಗುರು |
ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8
ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ |
ಸಹಕಾರನಾಗಿ ಭಕ್ತರ್ಗೆ ಕೋಲೆ |
ಸಹಕಾರನಾಗಿ ಭಕ್ತರ್ಗೆ ಅನವರತ |
ಅಹಿತರವಂಡಣೆ ಮಾಡುತ ಕೋಲೆ 9
ಮುನ್ನಿನಪರಾಧವ ಇನ್ನೇನು ನೋಡದೇ |
ಎನ್ನನುದ್ಧರಿಸು ದಯದಿಂದ ಕೋಲೆ |
ಎನ್ನನುದ್ಧರಿಸು ದಯದಿಂದ ಮತಿಕೊಟ್ಟು |
ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10
ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು |
ಕುಂದ ನೋಡದೇ ಸಲಹಯ್ಯಾ ಕೋಲೆ
ಕುಂದ ನೋಡದೇ ಸಲಹಯ್ಯಾ ಮಹಿಪತಿ |
ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11