ತವರು ಮನೆಯು ನನ್ನ ಸುವಿದ್ಯಪುರಲ್ಯದೆ
ಸಾವಿರಕೊಬ್ಬಗೆ ದೋರುತದೆ ಧ್ರುವ
ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ
ಭಾವಿಸದಲ್ಲದೆ ತಿಳಿಯುವದಲ್ಲ
ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ
ಆವಾಗ ತಿಳಿವುದು ಹೇಳಿದ ಸೊಲ್ಲ 1
ಸಾವಿರ ತೆನೆಯಲೊಪ್ಪುತದೆ ಒಳಕೋಟ
ಠವಿಠವಿಸುತದೆ ನೋಡಿ ಮನಮುಟ್ಟಿ
ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ
ದೇವಾಧಿ ದೇವನೊಬ್ಬನೆ ಜಗಜಟ್ಟಿ 2
ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ
ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ
ತುಂಬಿ ಥಳಗುಟ್ಟಿ ಹೊಳವ್ಹಾಂಗೆ
ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ 3
ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ
ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ
ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ
ಕ್ಷಣಕೊಮ್ಮೆ ಹೊಳೆವುವಾನೆ4
ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ
ಅಖರದಲೆವ್ವ ಈ ಮಾತು ಕೇಳೆ
ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ
ಸುಖ ಸುರುತ್ಹಾಳೆ ಇರುಳು ಹಗಲು 5
ಅತ್ತಿಗೆ ನಾದುನಿ ಭಾವ ಮೈದುನರೆಲ್ಲ
ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ
ಸುತ್ತೇಳುವ ಬಳಗ ಉತ್ತುಮರೆನಗೆಲ್ಲ
ಹಿತದೋರುತಾರವ್ವ ಸರ್ವಾಪ್ತರೆಲ್ಲ 6
ಸರ್ವಾಪ್ತವೆಂಬುದು ಸರ್ವೇಶನೆ ತಾನು
ಸರ್ವದಾ ಎನ್ನೊಳು ತಾ ಕಾಮಧೇನು
ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು
ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು 7
ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು
ಆವ ಕಾಲಕೆ ತಾ ಇವರ ಮೇಲು
ಇವರೆಂಬುದು ಒಂದೆ ಮಾತಿನ ಸ್ವಕೀಲು
ಸವಿಸುಖಬಲ್ಲರು ಅನುಭವಿಗಳು 8
ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ
ಭಾವಾರ್ಥದ ಮಾತು ಕೇಳಿರೆಲ್ಲ
ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ
ಪೂರ್ವಿಕರಿಗಿದೆ ಸಾರವೆಲ್ಲ 9
ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ
ಇದುವೆ ಅಯಿತು ತವರ ಮನಿ
ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ
ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ 10
ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ
ಒಳ ಹೊರಗೆ ಸುಖ ಎದುರಿಟ್ಟತೀಗ
ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ
ಸಲಹುತಾನೆ ಸ್ವಾಮಿ ಮಹಿಪತಿಗೆ 11