ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ
ಭಕ್ತಿಯ ದೃಢಯುಕ್ತಿಯ 1
ದೇವದೇವನ ಪೂರ್ಣ ನೋಡುವ
ಸೇವೆಮಾಡುವ ಸರ್ವದಾ ಕೊಂಡಾಡುವ
ನವವಿಧ ಭಕ್ತಿಯ ಮಾಡುವ ಭಾವವಿಡುವ 2
ತನು ಮನಧನ ಅರ್ಪಿಸಿ ಬಿಡುವ
ಮನಗೂಡುವ ಪ್ರಾಣಾಯಾಮ ಮಾಡುವ
ಅನುದಿನ ಸಾಧಿಸಿ ನೋಡುವ ಘನಗೂಡುವ 3
ಇಡಾಪಿಂಗಳ ಮಧ್ಯ ನೋಡುವ
ನಡೆವಿಡುವ ನಡುಹಾದಿಗೂಡುವ
ಒಡನೆ ಸ್ವಸುಖ ಪಡೆವ ಗೂಢ ನೋಡುವ 4
ಸವಿಸುಖಸಾರ ಸುರುತದೆ
ದ್ರವಿಸುತದೆ ಠವಠವಿಸುತದೆ
ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5
ಏನೆಂದನಬೇಕನುಭವ
ಖೂನದೋರುವ ಘನ ಮಳೆಗರೆವ
ಸ್ವಾನುಭವದಲಿ ಸೇವಿಸುವ ಅನುಸರಿಸುವ 6
ಜಾಗಿಸುತ್ತದೆ ವಸ್ತುಮಯ
ಬಗೆಬಗೆಯ ಯೋಗ ಇದೆ ನಿಶ್ಚಯ
ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7