ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ
ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ
ಬೋಧ ಭೋಗಲಂಪಟ ಭವ
ರೋಗಿಗೆ ದೊರಕೀತೆ ಪ
ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ
ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ
ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ
ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1
ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ
ಕೀಳುತನದಿ ಜ್ಞಾನವಲ್ಲಗಳೆಯುವಗೆ
ಮೇಲು ತಾನೆಂದು ತಿಳಿದೋಡಾಡುವವನಿಗೆ
ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2
ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ
ನಾನಾದೆ ದೇವನು ಗುರು ನೀನೇ ಯೋಗ್ಯ
ಹೀನರ ಕೊಂಡೇನು ನಾನೊಂದು ಪಾರಾದೆ
ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3