ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು
ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ
ದಾರಿಯೆನಗಿದೊಂದೇ ತೊರ್ಪದು ಸುಖನಿಧಿ
ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ
ಅನ್ನವಸ್ತ್ರಂಗಳಿಗಾಗಿ ದುಡಿವದೊಂದು
ಚೆನ್ನ ಪುತ್ರರ ರಕ್ಷಣೆಯೊಂದೆಡೆ
ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ
ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಪ್ರೇಮ ಬಾಂಧವರಾಗೆನ್ನನಪ್ಪಿಹರೋ
ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ
ಸಾಮಜವರದ ಸಲಹೆಂದು ಸಂತೋಷದಿ 2
ಭಾಗೀರತಿಪಿತ ಭಾಗವತಪ್ರೀತ
ಯೋಗಿಜನಂಗಳೊಳತಿ ಹಿತನೇ
ಸಾಗರಶಯನನೆ ಭೋಗಿಗಳ ಪುಣ್ಯನೆ
ಬಾಗುವ ಶರಣರ ಬಹುಭಾಗ್ಯನೇ 3
ನಾನಿಲ್ಲಿಗೆ ಬಂದ ಕಾರಣ ಕಾಣೆನೋ
ದೀನಪಾಲಕ ಕಾರ್ಯಮಾಡಿಸೋಯನ್ನಿಂ
ಏನಾದರು ಮಾಡು ತಪ್ಪಹೊರಿಸಬೇಡ
ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4