ಏನಾಗುವುದು ತಾನಾಗಿದೆ ಜಗ
ನೀನ್ಯಾಕದರೋಳ್ಪಾಲಿಡುವ್ಯೋ ಪ
ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ
ಜಾಣನಾಗಿ ಭವಗೆಲಿಯೆಲವೋ ಅ.ಪ
ಸತತದಿ ಸತಿಸುತರ್ಹಿತಕಾಗಿ ಬಲು
ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ
ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು
ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1
ಹಲವುವಿಧದಿ ನಾನೆ ದುಡಿದು ಧಾನ್ಯಧನ
ಗಳಿಸಿದೆನೆಂದು ಬಲು ಭ್ರಮಿಸುವೆಯೋ
ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ
ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2
ಎಷ್ಟುದಿನಿರ್ದರು ಬಿಟ್ಟು ಹೋಗುವುದನು
ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ
ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ
ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3