ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ
ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ.
ಪರರ ವನಿತೆ ಧನಗಳಿಂಗೆ
ಅರಿತು ಅರಿತು ಆಶೆಪಡುತ
ದುರಿತಕೋಟಿಗಳನು ಮಾಡಿ
ಪರಮ ನೀಚನೆನಿಸಿದವನು 1
ವನಗಳನು ಕಡಿಸಿ ಹಿರಿದು
ಮನೆಗಳನ್ನು ರಚಿಸಿಕೊಂಡು
ವನಿತೆ ಮಾತು ಕೇಳಿ ಜನನಿ
ಜನಕರನ್ನು ತೊರೆದ ಪಾಪಿ 2
ಸತ್ಯ ಮತವನು ತುಚ್ಛಗೈದು
ನಿತ್ಯಕರ್ಮಗಳನು ಬಿಟ್ಟು
ಮತ್ತನಾಗಿ ತಿಂದು ಮಲಗಿ
ಕತ್ತೆಯಂತೆ ಹೊರಳುವವನು 3
ಆರ್ತರಾದ ಜನರ ಸಲಹಿ
ಕೀರ್ತಿಯನ್ನು ಹೊಂದಿ ದೇಹ
ಸಾರ್ಥಕವನು ಮಾಡಿಕೊಳದೆ
ಧೂರ್ತನೆನಿಸಿಕೊಳುವ ನರನು 4
ವಾಸುದೇವ ಸಕಲ ದೋಷ
ರಾಸಿಗಳನು ದಹಿಸುವ ರಂ-
ಗೇಶವಿಠಲರೇಯ ನಿನ್ನ
ದಾಸನೆಂದು ಪೇಳದವನು 5