ನಾ ನೋಡಿ ಬಂದೆ ಕೇಳಮ್ಮ ಗೆಳತಿ ಪ
ನಾನಿಲ್ಲ ನೀನಿಲ್ಲ ಏನಂದರೇನಿಲ್ಲ
ಕಾಣುವ ಮಾತಲ್ಲ ಜಾಣೆ ಸುಳ್ಳಲ್ಲ ಅ.ಪ
ಹಸುರಿಲ್ಲ ಕೆಂಪಿಲ್ಲ ಪಶುವಿಲ್ಲ ಪಕ್ಷಿಲ್ಲ
ವಸುಧಿಲ್ಲ ಉದಧಿಲ್ಲ ವ್ಯಸನಿಲ್ಲ ಬಂಧವಿಲ್ಲ
ಹಸಿವಿಲ್ಲ ತೃಷೆಯಿಲ್ಲ ದೆಸೆಯಿಲ್ಲ ದಿಕ್ಕಿಲ್ಲ
ನಿಶೆಯಿಲ್ಲ ದಿವಯಿಲ್ಲ ಕುಸುಮಾಕ್ಷಿ ಸುಳ್ಳಲ್ಲ 1
ಜಲವಿಲ್ಲ ಗಗನಿಲ್ಲ ನೆಲವಿಲ್ಲ ಗಿರಿಯಿಲ್ಲ
ಕುಲವಿಲ್ಲ ಚಲವಿಲ್ಲ ಮಲಿನಿಲ್ಲ ಶೀಲಿಲ್ಲ
ಜಳಕಿಲ್ಲ ಊಟಿಲ್ಲ ಬೆಳಕಿಲ್ಲ ಕಾಳಿಲ್ಲ
ತಳಿಯಿಲ್ಲ ತಮಯಿಲ್ಲ ಲಲನೆ ಸುಳ್ಳಲ್ಲ 2
ಕೃಪೆಯಿಲ್ಲ ಕಪಟಿಲ್ಲ ಜಪವಿಲ್ಲ ತಪವಿಲ್ಲ
ಗುಪಿತಿಲ್ಲ ಬೈಲಿಲ್ಲ ನೆಪ್ಪಿಲ್ಲ ಮರೆವಿಲ್ಲ
ವಿಪಿನಿಲ್ಲ ಸದನಿಲ್ಲ ರಿಪುವಿಲ್ಲ ಸ್ನೇಹವಿಲ್ಲ
ಅಪ್ಪಯಿಲ್ಲ ಅವ್ವಯಿಲ್ಲ ನಿಪುಣೆ ಸುಳ್ಳಲ್ಲ 3
ರಾಗಿಲ್ಲ ರಚನಿಲ್ಲ ಯಾಗಿಲ್ಲ ಯಜ್ಞಿಲ್ಲ
ತ್ಯಾಗಿಲ್ಲ ತ್ಯಜನಿಲ್ಲ ಭೋಗಿಲ್ಲ ಭಾಗ್ಗ್ಯಿಲ್ಲ
ರೋಗಿಲ್ಲ ಶ್ರಮವಿಲ್ಲ ಬೈಗಿಲ್ಲ ಬೆಳಗಿಲ್ಲ
ಯಾಗಿಲ್ಲ ಪಾಪವಿಲ್ಲ ಭಗಿನಿ ಸುಳ್ಳಲ್ಲ 4
ಹೋಮವಿಲ್ಲ ವಿಪ್ರಿಲ್ಲ ಧೂಮವಿಲ್ಲ ಧೂಳಿಲ್ಲ
ಭೂಮಿಲ್ಲ ಜನನಿಲ್ಲ ಕಾಮಿಲ್ಲ ಮರಣಿಲ್ಲ
ನೇಮಿಲ್ಲ ಕ್ರಿಯವಿಲ್ಲ ನಾಮಿಲ್ಲ ರೂಪಿಲ್ಲ
ಸ್ವಾಮಿ ಶ್ರೀರಾಮ ಬಲ್ಲ ಭಾಮೆ ಸುಳ್ಳಲ್ಲ 5