ಭಯ ನಿವಾರಣ ಸುಳಾದಿ
ನಾಕೇಶ ದೇವತತಿ
ಆ ಕಮಲನಾಭ ಯತಿ ನಿಕರಗೊಲಿದನೆ
ಶ್ರೀಕರವದನ ಸರ್ವಲೋಕಕಧಿಪ ಕೃಪಾ-
ಲೋಕನದಲಿ ನೋಡಿ ಸುಖತೀರ್ಥನುತ ಚರಣ
ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ
ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ
ಈ ಕಾಲದಲಿ ಮನ ವ್ಯಾಕುಲಪಡಿಸುವ
ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ
ಲೋಕ ಲೋಕಾದಿಗಳ ಸಾಕುವ ಭಾರಕರ್ತ
ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ
ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು
ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ
ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ
ಲೋಕಪತಿಯೆ ಭಕ್ತಾನೀಕಕÀಭಯದಾತ
ಭೀಕರ ಬೆನ್ಹತ್ತಿ ತಾಕಿದ ಮನಸಿನ
ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ
ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ
ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1
ಭಯ ನಿವಾರಕದೇವ ಭಕ್ತವತ್ಸಲ ನೀನೆ
ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ
ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ
ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ
ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು
ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ
ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ
ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ
ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ
ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು
ಸಂತೈಸಿ ತರುಣಿಯ ರೂಪದಿ ಖಳನ
ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ
ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ
ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2
ನಿತ್ಯ ನಿನ್ನನು ನಂಬಿ
ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು
ಮೃತ್ಯು ಭಯವು ಉಂಟಿ
ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ
ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ
ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ
ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು
ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ
ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ
ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ
ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ
ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ
ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು
ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು
ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ
ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ
ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ
ಸಿರಿ ಗೋಪಾಲಕೃಷ್ಣವಿಠ್ಠಲ
ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3
ವಾಸುದೇವನೆ ನಿನ್ನ ದಾಸನ ಕಾಯುವಂಥ
ಈಶನಲ್ಲವೆ ಜೀವರಾಶಿಗಳಿಗೆ ಬಿಂಬ
ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ
ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ
ದಾಶರಥಿಯೆ ನಿನ್ನ ಅನುಜನ ಜೀವಭಯ
ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ
ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು
ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ
ವಾಸವ ಮೊರೆಯಿಡೆ ಒಲಿದು ಅಮೃತವಿತ್ತು
ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ
ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ
ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4
ತರಳತ್ವದಲಿ ಭಯವು ವರ ಯೌವ್ವನದಲಿ ಭಯವು
ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು
ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ
ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು
ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು
ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ
ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು
ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ
ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ
ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ
ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ
ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ
ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ
ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ
ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ
ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ
ಪರಮ ಮಂಗಳರೂಪ ದೈತ್ಯರಿಗತಿ ಘೋರ
ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು
ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು
ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು
ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ
ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ
ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ
ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5
ಜತೆ
ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ
ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ