ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ಖ ಬಲ್ಲನೆ ಸತ್ಯಸುಜ್ಞಾನಿ ನಡೆಯ ತಾರ್ಕಿ ಬಲ್ಲನೆ ಪರಸಾಧನದ ಬಗೆಯ ಪ ಕತ್ತೆ ಬಲ್ಲುದೆ ಹೊತ್ತ ಮುತ್ತುರತ್ನದ ಬೆಲೆಯ ತೊತ್ತು ಬಲ್ಲುದೆ ಮಹ ಉತ್ತಮರ ನಡೆಯ ಮಿಥ್ಯ ಬಲ್ಲನೆ ಶರಣಸತ್ಸುಜನರ ನೆಲೆಯ ಮೃತ್ಯು ಬಲ್ಲುದೆ ಹೊತ್ತು ಗೊತ್ತಿನ ಪರಿಯ 1 ಸೂಶೆಬಲ್ಲಳೆ ಸತಿಯ ಶೀಲವ್ರತನೇಮಗಳ ಕೋಳಿ ಬಲ್ಲುದೆ ಮರಿಗೆ ಮೊಲೆಹಾಲುಣಿಸಿ ಸಲಹೋದ ಕೇಳಬಲ್ಲನೆ ಕಿವುಡ ಆಲಿಸಿ ಏಕಾಂತವನು ಹೇಳಬಲ್ಲನೆ ಮೂಕ ಕೇಳಿ ಹರಿಚರಿತ 2 ಭ್ರಷ್ಟಬಲ್ಲನೆ ಸುಗುಣ ಶಿಷ್ಟ ಸಂತರ ಸಂಗ ದುಷ್ಟಬಲ್ಲನೆ ಪರರ ಕಷ್ಟನಷ್ಟಗಳ ಹುಟ್ಟುಗುರುಡ ಬಲ್ಲನೆ ಮುಂದಿಟ್ಟ ಗಂಟಿನ ವಿವರ ಕೆಟ್ಟಭವಿಬಲ್ಲನೆ ತತ್ತ್ವಕಟ್ಟಳೆಯ ಗುಟ್ಟು 3 ಕುರಿಯು ಬಲ್ಲುದೆ ತನ್ನ ಕೊರಲು ಕೊಯ್ಯವರೆಂದು ಮರುಳ ಬಲ್ಲನೆ ದೊರೆತ ನರಜನುಮ ಸಮಯ ನರಕದ ಹುಳ ಬಲ್ಲುದೆ ಕಾಳೋರಗನ ಹರಿದಾಟ ತಿರುಕ ಬಲ್ಲನೆ ಅರಸರ ಮನೆಯ ಸುದ್ದಿ 4 ಕಾಮಿಗಳು ಬಲ್ಲರೆ ನೇಮನಿತ್ಯದ ನಿಜವ ತಾಮಸರು ಬಲ್ಲರೆ ಸಾಮ ದಾನ ಗುಣವ ಪಾಮರರು ಬಲ್ಲರೆ ಭೂಮಿಯೊಳಧಿಕ ಮಮ ಸ್ವಾಮಿ ಶ್ರೀರಾಮನ ನಾಮಮಹಾತ್ಮೆಯನು 5
--------------
ರಾಮದಾಸರು