ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ
ಒಸರುವ ಗಡಿಗೆ ಪ
ಏಸುರೂಪಾಯ್ಗೆ ಕೊಂಡುಕೊಂಡೆವ್ವಾ
ಏಸುರಾಪಾಯ್ಗೆ ಕೊಂಡುಕೊಂಡಿ
ಹೇಸಿಕೊಳ್ಳದೆ ಇದನು ನೀನು
ಬೇಸರಿಲ್ಲದೆ ತೊಳೆಯುತಿದ್ದಿ
ವಾಸನಿಕ್ಕಿ ನಾರುತಿದೆ ಅ.ಪ
ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ
ಕುಂತು ಇದಕೆ ಶೋಧ ಹುಡುಕಿದ ಅವನು ದಾವ
ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ
ತಂತು ತಿಳಿಯದೆ ಹೊತ್ತುಕೊಂಡು
ನಿಂತಿಯಿದರ ಖ್ಯಾಲಿನೊಳಗೆ
ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1
ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು
ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು
ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ
ನಟ್ಟನಡುವೆ ಗಂಟುಬಿದ್ದು
ಕೊಟ್ಟು ನಿನಗೆ ಕಷ್ಟ ವಿಧ ವಿಧ
ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2
ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ
ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ
ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ
ಮಸಿಯ ಗಡಿಗ್ಹಿಡಿದು ಹಸನಮಾಡಿ
ವಸುಧೆಗಧಿಕ ಶ್ರೀರಾಮಪಾದ
ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3