ಈ ಸೊಬಗನಿನ್ನ್ಯಾವ ದೇವರೊಳು ಕಾಣೆ
ಈಶ ಪರಮೇಶ ಜಗದೀಶ ಶ್ರೀ ಶಿವನ ಪ
ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ
ಬಂಧುತ್ವದಲಿ ವಿಷ್ಣು ಸೋದರಿಯ ರಮಣ
ಅಂದ ಚಂದದಿ ನೋಡೆ ಸುಂದರೇಶ್ವರನಿವನು
ಚಂದ್ರ ನಾಗಾಭರಣ ಲೋಕ ಶಂಕರನು 1
ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು
ಯೋಗದಲಿ ಯೋಗೇಶ ಯೋಗ ಭಾವಿತನು
ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ
ನಿಗಮ ಗೋಚರನು 2
ವೀರತನದೊಳಗಿವನು ತ್ರಿಪುರ ಸಂಹಾರಕನು
ಧೀರತನದೊಳಗಿವನು ಮದನವಿಧ್ವಂಸಿ
ಸಾರತನದೊಳಗಿವನು ಶ್ರೀ ಮಹಾದೇವನು
ಕಾರಣಕೆ ಕಾರಣನು ಜಗದಾದಿ ಗುರುವು 3
ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು
ಪಟ್ಟಣವು ರತ್ನ ರಜತಾದ್ರಿಯಾಗಿಹುದು
ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ
ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4
ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು
ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು
ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು
ಎಲ್ಲಿ ನೋಡಲು ಧೇನುಪುರನಾಥ ಶಿವನು 5